ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದ ಚೌಕಿಪೂಜೆಗೂ ತಟ್ಟಲಿದೆಯಾ. . . ಮೂಢನಂಬಿಕೆಯ ಬಿಸಿ

ಲೇಖಕರು : ಡಾ|| ಎಂ. ಅಣ್ಣಯ್ಯ ಕುಲಾಲ್, ಉಳ್ತೂರು
ಗುರುವಾರ, ಡಿಸೆ೦ಬರ್ 12 , 2013

ಮಡೆ-ಮಡೆಸ್ನಾನ, ಗಣೇಶ ಹಾಲು ಕುಡಿಯುವಿಕೆ, ಹೀಗೆ ಹತ್ತು ಹಲವಾರು ಮೂಲ ಹಾಗೂ ಮೂಢನಂಬಿಕೆಗಳ ಪರ-ವಿರುದ್ಧ ಹಾರಾಟ-ಹೋರಾಟ, ಧರಣಿ ಹಾಗೂ ಕಾನೂನಿನ ಬಗ್ಗೆ ರಾಜ್ಯ ಮಟ್ಟದಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿರುವಾಗಲೇ, ಪಶ್ಚಿಮ ಘಟ್ಟದ ತಪ್ಪಲು, ರಾಜ್ಯಕ್ಕೆ ಈಗಿನ ಕನ್ನಡ ಸಾಹಿತ್ಯ ಅಧ್ಯಕ್ಷರಾದ ಹಾಲಂಬಿಯವರನ್ನು ನೀಡಿದ ಹಾಲಾಡಿ-ಶಂಕರನಾರಾಯಣದ ಸಮೀಪದ ಸಿದ್ಧಾಪುರದಲ್ಲಿ ಜರುಗಿದ 13ನೇ ವರ್ಷದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಯಕ್ಷಗಾನದ ಗೋಷ್ಠಿಯಲ್ಲಿ, ಯಕ್ಷಗಾನದ ಚೌಕಿಗೂ, ಅಲ್ಲಿ ಜರುಗುವ ಗಣಪತಿ ಪೂಜೆಗೂ ವಿಚಾರವಾದದ ಹೆಸರಲ್ಲಿ, ಮೂಲ ಹಾಗೂ ಮೂಢನಂಬಿಕೆಯ ಹೊಯ್ದಾಟದಲ್ಲಿ ಬಿಸಿ ಮುಟ್ಟಲಿದೆಯಾ, ಎಂಬ ಸಾಮಾಜಿಕ ಕಳವಳ ಹುಟ್ಟಿಕೊಂಡಿದ್ದು, ಇದು ಹೊಸದೊಂದು ಚಿಂತನೆಯ ಮಜಲಿಗೆ ತೆರೆದುಕೊಂಡು, ಸಾಹಿತ್ಯ-ಸಮ್ಮೇಳನಗಳು ಕೇವಲ ಆಡಂಬರವಾಗಿರದೆ, ಜನಪರ ಚಿಂತನೆಗಳಿಗೆ ಒಡ್ಡಿಕೊಂಡು, ಜನಸ್ನೇಹಿ ಕಮ್ಮಟಗಳಾಗುತ್ತವೆ ಎಂಬುದನ್ನು ಶೃತಪಡಿಸಿತು.

ಅದಕ್ಕೂ ಮುಂದೆ ಹೋಗಿ ಕಾಲಮಿತಿ ಯಕ್ಷಗಾನ, ವ್ಯಾಪಾರೀಕರಣದ ನಗರಕ್ಕೆ ಹಾಗೂ ಕಲಾವಿದರಿಗೆ ಸೂಕ್ತ ಎಂದು ಕಂಡರೂ ಸಹಾ, ಯಕ್ಷಗಾನವನ್ನು ಹರಕೆ ಆಟದ ರೂಪದಲ್ಲಿ ಉಳಿಸಿ-ಬೆಳೆಸಿಕೊಂಡು ಬರುತ್ತಿರುವ, ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು, 25-30ವರ್ಷಗಳಷ್ಟು ಕಾಲ ಕಾದು ಮನೆಯ ಮುಂದೆ ಹರಕೆ ಆಟ ಆಡಿಸುವ, ಸಂಜೆಗೆ ಹೊತ್ತಿಸಿದ ದೀವಟಿಗೆ ಬೆಳಕನ್ನು ಬೆಳಗಾದ ನಂತರವೇ ಆರಿಸುವ ಪದ್ಧತಿಯನ್ನೇ ಜೀವಾಳವಾಗಿಸಿಕೊಂಡಿರುವ, ಜನಸಾಮಾನ್ಯ ಹೊತ್ತಲ್ಲದ ಅಪರಾತ್ರಿಯಲ್ಲಿ ಆ ದೀಪವನ್ನು ನಂದಿಸಿಟ್ಟು ನಿದ್ರಿಸಲು ಮಾನಸಿಕವಾಗಿ ಸಿದ್ಧನಿದ್ದಾನೆಯೇ ಎಂಬ ಜಿಜ್ಞಾಸೆ ನೈಜ ಜನಧ್ವನಿಯಾಗಿತ್ತು. ಇದೆಲ್ಲವೂ ಗೋಷ್ಟಿಯ ಮುಖ್ಯ ಸಮನ್ವಯಗಾರರಾದ ಮಣಿಪಾಲ ತಾಂತ್ರಿಕ ಕಾಲೇಜಿನ ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ತಮ್ಮ ಬಾಷಣದಲ್ಲಿ ತೆರೆದಿಟ್ಟ ಸತ್ಯಗಳು. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅವಕಾಶವಿಲ್ಲದೇ ಸೊರಗಿದ ಯಕ್ಷಗಾನಕ್ಕೆ ಸೂಕ್ತ ಮರ್ಯಾದೆ ನೀಡಿದ ಸಿದ್ದಾಪುರದ ಕನ್ನಡಾಭಿಮಾನಿಗಳನ್ನು ಅವರು ಹ್ರದಯಾಂತರಾಳದಿಂದ ಅಬಿನಂದಿಸಿದ್ದು ಅವರ ಕಲಾಪ್ರೀತಿಗೆ ದ್ಯೋತಕವಾಗಿತ್ತು.

ಆರ‍್ಗೋಡು ಮೋಹನದಾಸ್ ಶೆಣೈ, ಹೇರಂಜಾಲು ಗೋಪಾಲ ಗಾಣಿಗ, ರಾಘವೇಂದ್ರ ಆಚಾರಿಯಂತಹ ಪ್ರಬುದ್ಧ ಕಲಾವಿದರು, ಯಕ್ಷಗಾನದ ಭಾಗವತಿಕೆಯಲ್ಲಿಯೇ ಪಿ. ಹೆಚ್. ಡಿ. ಮಾಡಿದ ಡಾ|| ಶ್ರೀಕಾಂತ ಸಿದ್ಧಾಪುರ, ಯಕ್ಷಗಾನ ಕ್ಷೇತ್ರದ ಜಾಡನರಿತು, ಬರೆದು ವಿಮರ್ಶಿಸುವ ಪ್ರಾಧ್ಯಾಪಕ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿಯನ್ನೊಳಗೊಂಡು ಪ್ರಸ್ತುತ-ಪಡಿಸಲ್ಪಟ್ಟ ಯಕ್ಷಗಾನ ಗೋಷ್ಠಿ ಫಲಪ್ರದವಾಗಿ ಹೊರಹೊಮ್ಮಿತು. 4 ದಶಕಗಳಷ್ಟು ಕಾಲ ಯಕ್ಷಗಾನದ ರಂಗಸ್ಥಳದಲ್ಲಿ ಮೆರೆದ ಆರ‍್ಗೋಡು ಶೆಣೈಯವರನ್ನು ಯಕ್ಷಗಾನದ ಪಾತ್ರಪರಿಚಯ ಮಾಡುವಲ್ಲಿ ಆಯ್ಕೆಮಾಡಿದ್ದು ಹಿರಿಯ ಕಲಾವಿದರಿಗೆ ಕೊಟ್ಟ ನೈಜ ಗೌರವ. ರಾಮ ಭರತನಂತಹ ಪಾತ್ರಗಳಿಗೆ ಜೀವ ಕೊಟ್ಟು ವೇದಿಕೆಯಲ್ಲಿ ರಾಮನಾಗಿ ಮೆರೆದವರಿಗೆ, ಪಾತ್ರಗಳನ್ನು ಬಗೆದು ತೆರೆದಿಡಲು ಕೊಟ್ಟ ಅವಧಿ ಕಡಿಮೆಯಾಗಿದ್ದರೂ ಸಹಾ ಕೊಟ್ಟ ಸಮಯವನ್ನು ಅವರು ಸ್ಪಷ್ಟವಾಗಿ ನಿರೂಪಿಸುವಲ್ಲಿ ಯಶಸ್ವಿಯಾದರು. ಪಾತ್ರಗಳಿಗೆ ಮೆರುಗಿನ ಚೌಕಟ್ಟನ್ನು ಕೊಡುವಷ್ಟರಲ್ಲಿ ಅವರ ಸಮಯ ಮೀರಿತ್ತು. ಒಳಗಿನ ಹೂರಣಗಳನ್ನು ತೆಗೆದಿಡುವಲ್ಲಿ ಕಾಲಮಿತಿ ಕಾಡಿತ್ತು ಅಂತ ನನ್ನ ಅನಿಸಿಕೆ. ತನ್ನ ಮಾತನ್ನು, ಹಿರಿಯರಿಗೆ ಹರಕೆ, ಕಿರಿಯರಿಗೆ ಹಾರೈಕೆ ಎಂಬ ಅರ್ಥಪೂರ್ಣ ಉದ್ಗಾರದೊಂದಿಗೆ ಆರಂಭಿಸಿದಾಗಲೇ ಅವರ ಅನುಭವದ ಆಳವನ್ನು ತೋರಿಸಿತ್ತು. ಮಡಿವಾಳರೋರ್ವರ ಒಂದು ಸಮಯೋಚಿತ ಮಾತು ಇಡೀ ರಾಮಾಯಣವನ್ನು ಶುಚಿಗೊಳಿಸಿತು. ಒಣಗಿದ ನಾಯಿ ಮಾಂಸ ತಿಂದು, ಹಸಿವ ಇಂಗಿಸಿಕೊಂಡು, ಗಾಯತ್ರಿ ಮಂತ್ರವ ಕೊಟ್ಟು ಮಹಾಬ್ರಾಹ್ಮಣನಾದ ವಿಶ್ವಾಮಿತ್ರನಾದ, ರಾಮಾಯಣವನ್ನು ಕೊಟ್ಟ ವಾಲ್ಮೀಕಿ, ಮಹಾಭಾರತವನ್ನು ಕೊಟ್ಟ ವೇದವ್ಯಾಸ, ಭಗವದ್ಗೀತೆಯನ್ನು ಕೊಟ್ಟ ಕೃಷ್ಣ ಪರಮಾತ್ಮ ಎಲ್ಲರೂ ಜಾತಿಯಲ್ಲಿ ಕೆಳಗಿನವರಾದರೂ ಸಹಾ ಸಂಸ್ಕಾರ ಹಾಗೂ ಕರ್ತವ್ಯದಿಂದ ಮೇಲಕ್ಕೇರಿದವರು ಎಂಬ ಅನಿಸಿಕೆಗಳು ಈಗಿನ ಜಾತಿ-ನೀತಿ, ಮೇಲು-ಕೀಳುಗಳೆಂಬ ಹೊಯ್ದಾಟಗಳಿಗೆ ಸ್ಪಷ್ಟ ಉತ್ತರವಾಗಿತ್ತು. ಕುಂದಾಪುರದ ಹಿರಿಯ ಜೀವಗಳಾದ ವಿ. ಜಿ. ಕೊಡಗಿ, ಕಾಳಾವರ್‌ಕಾರ್, ಕೋಣಿ ಕಾರಂತ, ಚಾತ್ರರಂತಹ, ಹಿರಿಯರು ಗೋಷ್ಠಿಯಲ್ಲಿ ಉಪಸ್ಥಿತರಿದ್ದುದು ಗೋಷ್ಠಿಗೊಂದು ಕಳೆಕೊಟ್ಟಿತು.

ಚೌಕಿಯ ಗಣಪತಿ ಪೂಜೆ
ಸಮನ್ವಯಕಾರರಾಗಿ ಮಾತಾಡಿದ್ದಲ್ಲದೆ ಜನಮಾನಸದ ಒಳಧ್ವನಿಗೆ ಗಂಟಲಾದ ಪ್ರೋ. ಎಸ್. ವಿ. ಉದಯ್ ಕುಮಾರ್ ಶೆಟ್ಟಿ, ಚೌಕಿಯ ಗಣಪತಿ ಪೂಜೆಗೂ ಮೂರ್ತಿ ಪೂಜೆ, ಅಂಧಾನುಕರಣೆಯ ಬಿಸಿಮುಟ್ಟಿ ಯಕ್ಷಗಾನಕ್ಕೆ ಹಿನ್ನಡೆಯಾಗಬಾರದೆಂಬ ಕಳಕಳಿ, ವ್ಯಾಪಾರೀಕರಣದ ಹೆಸರಲ್ಲಿ ಕಾಲಮಿತಿಗೆ ಯಕ್ಷಗಾನವನ್ನು ಒಳಪಡಿಸಿ ಹಣವನ್ನು ಬಾಚಿಕೊಂಡು, ಮಧ್ಯರಾತ್ರಿಗೆ ಮನೆಗೆ ಹೋಗುವ ಪಟ್ಟಣದ ಮನಸ್ಥಿತಿಗೂ, ಮನೆಯ ಮುಂಭಾಗದ ರಂಗಸ್ಥಳದಲ್ಲಿ ಹಚ್ಚಿದ ದೀವಟಿಗೆ ಅಥವಾ ನಂದಾದೀಪದ ಬೆಳಕನ್ನು ಹೊತ್ತಲ್ಲದ ಅಪರಾತ್ರಿಯಲ್ಲಿ ನಂದಿಸಿಟ್ಟು ನಿದ್ರೆಮಾಡಲಾರದ ಪರಿಸ್ಥಿತಿಯಲ್ಲಿ ಹರಕೆಯಾಟವಾಡಿಸುವ ಮುಗ್ಧ ಹಳ್ಳಿಯ ಜನರಲ್ಲಿ, ಅವರ ಮನೋಸ್ಥಿತಿ ಬೇರೆಯೇ ಇದೆ. ಇದರಿಂದಾಗಿಯೇ ಒಂದೇ ದೇವಸ್ಥಾನದಲ್ಲಿ 5-6 ಮೇಳಗಳಾಗುತ್ತಿರುವುದು. 20-30 ವರ್ಷ ಆಟಗಳಿಗಾಗಿ ಕಾಯುತ್ತಿರುವುದು ಈ ಮನಸ್ಥಿತಿಯನ್ನು ಯಕ್ಷಗಾನವನ್ನು ವ್ಯಾಪಾರೀಕರಣದ ದೃಷ್ಟಿಯಲ್ಲಿ ಮಾಡುವವರು, ಒಳಗಣ್ಣ ತೆರೆದಿಟ್ಟು ನೋಡಬೇಕೆಂಬ ಮಾತು ಮಾರ್ಮಿಕವಾಗಿತ್ತು. ಕ್ಷೇತ್ರ ಮಹಾತ್ಮೆಯ ಹೆಸರಲ್ಲಿ ಮಹಾತ್ಮೆಗಳೇ ಇಲ್ಲದ ಕ್ಷೇತ್ರಗಳ ಮಹಾತ್ಮೆ ಬರೆಯುವ, ಯಕ್ಷಗಾನದ ಚೌಕಟ್ಟಿಗೆ ಸೂಕ್ತವಲ್ಲದ, ಸಮಯ ಸಂದರ್ಭಗಳಿಗೆ ಒಗ್ಗಿಕೊಳ್ಳದ ಕೋಲನರ್ತನ, ಪಾಡ್ದನ, ಭೂತನರ್ತನವನ್ನು ಯಕ್ಷಗಾನಗಳಿಗೆ ಮುಖ್ಯ ಹೂರಣಗಳನ್ನಾಗಿಸಿಕೊಳ್ಳುವುದು ಸೂಕ್ತ ಅಲ್ಲ ಎಂಬುದು ಸಹ ದಿಟ. ಎಲ್ಲಾ ಕಲಾಪ್ರಕಾರಗಳಿಗಿಂತ, ಮಾತು, ಸಂಗೀತ, ವೇಷಭೂಷಣ, ನೃತ್ಯ ಹಾಗೂ ಹಿಮ್ಮೇಳಗಳಂತಹ ಪಂಚ ಕಲಾಪ್ರಕಾರಗಳನ್ನ್ನು ಸಮತೂಕದಲ್ಲಿ ಬಳಸಿಕೊಂಡು, ಬದುಕಿ ಬಂದ ಯಕ್ಷಗಾನದ ಬಗ್ಗೆ ಅರ್ಥಪೂರ್ಣವಾಗಿ ಮೂಡಿಬಂದ ಗೋಷ್ಠಿ, ಆಡಂಬರದ, ಠಾಕು-ಠೀಕಿನ ಸಾಹಿತ್ಯ ಸಮ್ಮೇಳನಗಳಿಗಿಂತ ಒಂದು ಭಿನ್ನ ಹಾಗೂ ಮಾದರಿಗೋಷ್ಠಿಯಾಗಿ ಮೂಡಿಬಂತು ಎನ್ನುವುದರಲ್ಲಿ ಸಂದೇಹವಿಲ್ಲ, ಇಂತಹ ಗೋಷ್ಠಿಯನ್ನು ಆಯೋಜಿಸಿದ ತಾಲೂಕು ಸಮ್ಮೇಳನ ಘಟಕದ ಸದಸ್ಯರಿಗೆ ಶಹಭಾಶ್ ಹೇಳಲೇಬೇಕು.

****************

ಸಮಾರ೦ಭದ ಕೆಲವು ಛಾಯಾಚಿತ್ರಗಳು



ಡಾ|| ಶ್ರೀಕಾಂತ ಸಿದ್ಧಾಪುರ , ಆರ‍್ಗೋಡು ಮೋಹನದಾಸ್ ಶೆಣೈ ಹಾಗೂ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ (ಎಡದಿ೦ದ ಬಲಕ್ಕೆ)




ಹೆರಂಜಾಲು ಗೋಪಾಲ ಗಾಣಿಗ ಹಾಗೂ ರಾಘವೇಂದ್ರ ಆಚಾರಿಯವರ ಗಾನಸುಧೆ




ಮಾಮೂ ಮಾಮೂ ಮಾತಾಡು-ಪುಸ್ತಕ ಬಿಡುಗಡೆ.



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ